ಮಾಸ್ಟರಸ್, ಎಡ್ಗರ್ ಲೀ
1869-1950. ಕವಿ, ಹುಟ್ಟಿದ್ದು ಕಾನ್‍ಪಾಸ್‍ನ ಗಾರ್ನೆಟ್‍ನಲ್ಲಿ, ಬೆಳೆದದ್ದು ಪೀಟರ್ಸ್‍ಬರ್ಗ್ ಮತ್ತು ಲೂಯಿಸ್‍ಟನ್‍ನಲ್ಲಿ. ನಾಕ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂದೆ ನ್ಯಾಯಶಾಸ್ತ್ರ ಓದಿ 1891ರಲ್ಲಿ ನ್ಯಾಯವಾದಿಯಾದ. ಕೆಲವೇ ಸಮಯದಲ್ಲಿ ಇದನ್ನು ತೊರೆದು ಸಾಹಿತ್ಯದ ಕಡೆ ಗಮನ ಹರಿಸಿದ. ಗ್ರೀಕ್ ಅನ್‍ಥಾಲಜಿಯ ಚಾಟು ಪದ್ಯಗಳನ್ನು ಓದಿ ಪ್ರಭಾವಿತನಾಗಿ 1915ರಲ್ಲಿ ಇದರ ಅಣಕರೂಪವಾದ ಸ್ಪೂನ್ ರಿವರ್ ಅನ್‍ಥಾಲಜಿಯನ್ನು ಪ್ರಕಟಿಸಿದ. ಇದು ಇಲಿನಾಯ್ಸ್‍ನ ಶ್ಮಶಾನವೊಂದರ ಕಾಲ್ಪನಿಕ ಚರಮಗೀತೆಗಳ ಸಂಗ್ರಹ. ಕಿಟಕಿಯಿಂದ ಕೂಡಿದ ಮಾತುಗಳ ನಿರೂಪಣೆಯ ಈ ಚರಮಗೀತೆಗಳ ಮಾಲೆ ಮಧ್ಯ ಪಶ್ಚಿಮದ ಭಾಗವನ್ನು ಪ್ರತಿಬಿಂಬಿಸುತ್ತಿತ್ತು. ಅಲ್ಲಿಂದ ಮುಂದೆ ಹಲವಾರು ಸಂಪುಟಗಳನ್ನು ಈತ ಪ್ರಕಟಿಸಿದರೂ ಮೊದಲ ಪುಸ್ತಕದ ಖ್ಯಾತಿ ಅವುಗಳಿಗೆ ಬರಲಿಲ್ಲ.

	ಎ ಬುಕ್ ಆಫ್ ವರ್ಸ್ (1898), ಡೂಮ್ಸ್ ಡೇ ಬುಕ್ (1920), ದಿ ನ್ಯೂ ಸ್ಪೂನ್ ರಿವರ್ (1924), ದಿ ಫೇಟ್ ಆಫ್ ದಿ ಜ್ಯೂರಿ (1929) ಇವು ಈತನ ಕವನ ಸಂಕಲನಗಳು. ಲಿಂಕನ್ (1931), ಲಿಂಡ್‍ಸೇ (1935), ಹ್ವೈಟ್‍ಮನ್ (1937) ಮತ್ತು ಮಾರ್ಕ್ ಟ್ವೈನ್ ಇವರುಗಳ ಜೀವನ ಚರಿತ್ರೆಗಳನ್ನೂ ಹಲವಾರು ಕಾದಂಬರಿಗಳನ್ನೂ ಬರೆದ. ಅಕ್ರಾಸ್ ಸ್ಪೂನ್ ರಿವರ್ (1937) ಇದು ಈತನ ಆತ್ಮಚರಿತ್ರೆ.
(ಎಂ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ